Skip to content

ಆತಂಕ

ಆತಂಕ ಎಂದರೇನು?

index2ಅಪಾಯ ಎದುರಾದಾಗ, ಒತ್ತಡದ ಸನ್ನಿವೇಶಗಳಲ್ಲಿ ದೇಹದಲ್ಲಿ ಸ್ವಾಭಾವಿಕವಾಗಿ ಉಂಟಾಗುವ ಪ್ರತಿಕ್ರಿಯೆಯೇ ಆತಂಕ. ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗುವಾಗ, ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗುವಾಗ, ಯೋಜಿಸಿದ ಕೆಲಸದ ಗಡುವನ್ನು ಸಮೀಪಿಸುತ್ತಿರುವಾಗ ಇಂತಹ ಒತ್ತಡದ ಸನ್ನಿವೇಶಗಳಲ್ಲಿ ನಾವು ಭಯಗ್ರಸ್ತರು ಮತ್ತು ಅಸ್ಥಿರರಾಗುತ್ತೇವೆ. ಸ್ವಲ್ಪ ಪ್ರಮಾಣದ ಆತಂಕವನ್ನು ಅನುಭವಿಸಿವುದು ಕಠಿಣ ಸ್ಪರ್ಧಾತ್ಮಕ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತದೆ. ಆದರೆ, ಓರ್ವ ವ್ಯಕ್ತಿಯು ಅಸಾಧಾರಣ ಭಯ ಮತ್ತು ಚಿಂತೆಯನ್ನು ಹೊಂದಿದಲ್ಲಿ, ಅವುಗಳು ಕಾರ್ಯ ನಿರ್ವಹಣೆಗೆ ತಡೆಯನ್ನು ಮತ್ತು ಯಾತನೆಯನ್ನು ಉಂಟು ಮಾಡುವುದು.

ಆತಂಕವು ಅತ್ಯಂತ ಕಷ್ಟಕರ ಭಾವನೆಯಾಗಿದ್ದು ಅದು ಓರ್ವ ವ್ಯಕ್ತಿಯನ್ನು ದುಃಖಿತ, ಭಯಗ್ರಸ್ಥ ಮತ್ತು ಮುಜುಗರ ಗೊಳಿಸುತ್ತದೆ. ಆತಂಕವು ಎಲ್ಲ ವಯಸ್ಸಿನ, ಎಲ್ಲ ಸಾಮಾಜಿಕ ಅರ್ಥಿಕ ಹಿನ್ನಲೆಯ ಪುರುಷ-ಮಹಿಳೆಯರೆಲ್ಲರಲ್ಲಿಯೂ ಪ್ರಭಾವ ಬೀರುವುದು.

ಆತಂಕವು ದೇಹ, ಯೋಚನೆಗಳು, ಭಾವನೆಗಳು ಮತ್ತು ಜೀವನ ಶೈಲಿಯ ಮೇಲೆ ಪರಿಣಾಮ ಬೀರುವುದು.

ಆತಂಕಕ್ಕೆ ಕಾರಣಗಳೇನು?

ಯಾವುದೇ ನಿರ್ದಿಷ್ಟ ಕಾರಣದಿಂದ ಆತಂಕದ ಸಮಸ್ಯೆಯು ಉಂಟಾಗುವುದಿಲ್ಲ. ಹಲವಾರು ವಿಚಾರಗಳು ಇದರಲ್ಲಿ ಪಾತ್ರ ನಿರ್ವಹಿಸುತ್ತದೆ.

 • ಅನುವಂಶಿಕತೆ
 • ಮೆದುಳಿನ ರಾಸಾಯನಿಕಗಳು
 • ಜೀವನದ ಸನ್ನಿವೇಶಗಳು; ಉದಾ: ಪ್ರೀತಿ ಪಾತ್ರರ ಅಗಲುವಿಕೆ, ಕೆಲಸ ಕಳೆದುಕೊಳ್ಳುವಿಕೆ, ವ್ಯಾಪಾರದಲ್ಲಿ ನಷ್ಟ ಇತ್ಯಾದಿ.
 • ವ್ಯಕ್ತಿತ್ವ – ಸ್ವಾಭಿಮಾನ ಕಡಿಮೆಯಿರುವ ಮತ್ತು ನಿಭಾಯಿಸುವ ಸಾಮರ್ಥ್ಯ ಕಡಿಮೆಯಿರುವ ವ್ಯಕ್ತಿಗಳು ಹೆಚ್ಚಾಗಿ ಆತಂಕಕ್ಕೆ ಒಳಗಾಗುತ್ತಾರೆ.

ಲಕ್ಷಣಗಳು:

ದೈಹಿಕ ಬದಲಾವಣೆಗಳು:

 • ಉಸಿರಾಟದ ವೇಗದ ಹೆಚ್ಚಳ
 • ತಲೆತಿರುಗುವಿಕೆ
 • ಬಾಯಿ ಒಣಗುವುದು.
 • ಹೃದಯ ಬಡಿತದ ವೇಗ ಹೆಚ್ಚಾಗುವುದು.
 • ಮಾಂಸಖಂಡಗಳು ಹಿಡಿದುಕೊಳ್ಳುವುದು.
 • ತೀವ್ರವಾಗಿ ಬೆವರುವುದು.
 • ಅತಿಸಾರ, ಭೇದಿ
 • ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಂತೆ ಆಗುವುದು. (ಎಂಜಿಲು ನುಂಗಲು ಕಷ್ಟವಾಗುವುದು)
 • ಬಳಲುವಿಕೆ.
 • ಅಸಮಾಧಾನದಿಂದ ಇರುವುದು.
 • ನಿದ್ರಾಭಂಗ ಅಥವಾ ಚಿಂತೆಯ ಕಾರಣಗಳಿಂದ ನಿದ್ರೆ ಬರದಿರುವುದು.
 • ಮಾಂಸಖಂಡಗಳ ಸೆಳೆತ.
 • ಎದೆನೋವು ಅಥವಾ ಸಂಕಟ.
 • ಪಾದಗಳು ಮತ್ತು ಹಸ್ತಗಳು ಜೋಮು ಹಿಡಿದಂತೆ ಆಗುವುದು.

 

ಮಾನಸಿಕ ಲಕ್ಷಣಗಳು:

 • ಏಕಾಗ್ರತೆಗೆ ಭಂಗ.
 • ಸಾಯುವ ಭಯ.
 • ಹಿಡಿತವನ್ನು ಕಳೆದುಕೊಳ್ಳುವ ಭಯ.
 • ಪ್ರತಿನಿತ್ಯದ ಸಾಮಾನ್ಯ ಘಟನೆಗಳಿಗೆ ಮತ್ತು ಸಮಸ್ಯೆಗಳಿಗೆ ನಿರಂತರವಾಗಿ ಚಿಂತಿಸುವುದು.
 • ಬಿಟ್ಟು ಹೋಗದ ಅಸಹನೆ/ರಗಳೆ.
 • ಚಿಕ್ಕ ಆಶ್ಚರ್ಯಕರ ವಿಚಾರಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವುದು.

ಮೇಲೆ ಹೇಳಿದವುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಲಕ್ಷಣಗಳು ಆರು ತಿಂಗಳವರೆಗೆ ಕಂಡುಬಂದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುವುದು.

ಯಾರಿಗೆ ಈ ರೀತಿಯ ಅಪಾಯವು ಆಗಬಹುದು?

ಈ ಕೆಳಗೆ ಓರ್ವ ವ್ಯಕ್ತಿಯಲ್ಲಿ ಆತಂಕದ ಸಮಸ್ಯೆಯನ್ನು ಸೃಷ್ಟಿಸುವ ವಿಚಾರಗಳನ್ನು ಹೇಳಲಾಗಿದೆ: ಒತ್ತಡವನ್ನು ತಡೆದುಕೊಳ್ಳಲು ಕಡಿಮೆ ಸಾಮರ್ಥ್ಯ ಇರುವವರು, ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸುವ ಮತ್ತು ನಿಭಾಯಿಸುವ ಕೌಶಲ್ಯದ ಕೊರತೆಯಿರುವವರು, ಕುಟುಂಬ ಅಥವಾ ಸ್ನೇಹಿತರಿಂದ ಸೂಕ್ತ ಬೆಂಬಲ ದೊರಕದವರು, ಆರ್ಥಿಕ ಒತ್ತಡವನ್ನು ಅನುಭವಿಸುತ್ತಿರುವವರು, ಸಂಬಂಧದಲ್ಲಿ ಸಮಸ್ಯೆಯಿರುವವರು, ಜೀವನದಲ್ಲಿನ ಬದಲಾವಣೆಗಳು; ಉದಾ: ಅತಿಯಾದ ಬಯಕೆಗಳು, ಹೊಸ ಬಗೆಯ ನಿರೀಕ್ಷೆಗಳು, ಕಾರ್ಯ ಕ್ಷೇತ್ರದಲ್ಲಿ ಒತ್ತಡದಲ್ಲಿರುವವರು.

ಆತಂಕದ ಸಮಸ್ಯೆಯ ನಿವಾರಣೆ ಹೇಗೆ?

ಆತಂಕದ ಸಮಸ್ಯೆಯನ್ನು ಔಷಧಿಗಳಿಂದ ಮತ್ತು ಸೂಕ್ತವಾದ ಮಾನಸಿಕ ಚಿಕಿತ್ಸೆಯಿಂದ ನಿವಾರಿಸಬಹುದು.

ಔಷಧಿಗಳನ್ನು ದೈಹಿಕ ಲಕ್ಷಣಗಳನ್ನು ನಿಯಂತ್ರಿಸಲು ಉಪಯೋಗಿಸುವರು. ಮಾನಸಿಕ ಚಿಕಿತ್ಸೆಯು ಮಾನಸಿಕ ಸ್ವಾಸ್ಥ್ಯ ಪರಿಣಿತರೊಂದಿಗೆ ಮಾತನಾಡಿ ಆತಂಕಕ್ಕೆ ಕಾರಣವಾದ ಅಂಶವನ್ನು ಹುಡುಕಿ ಅದರ ಲಕ್ಷಣಗಳನ್ನು ನಿಭಾಯಿಸುವುದನ್ನು ಒಳಗೊಂಡಿದೆ.

ನಡವಳಿಕೆ ಮತ್ತು ಅರಿವಿನ ಚಿಕಿತ್ಸೆ (ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಸಿ.ಬಿ.ಟಿ.)

ಆತಂಕದ ಸಮಸ್ಯೆಯನ್ನು ನಿವಾರಿಸಲು ಸಿಬಿಟಿ ಯು ಉಪಯುಕ್ತವಾಗಿದೆ. ಅರಿವಿನ ಚಿಕಿತ್ಸೆಯು ವ್ಯಕ್ತಿಯಲ್ಲಿ ಭಯವನ್ನುಂಟುಮಾಡುವ ಚಿಂತನಾ ಪರಿಯನ್ನು ಬದಲಾಯಿಸಲು ಸಹಾಯಕವಾಗುವುದು.  ನಡುವಳಿಕೆಗಳ ಚಿಕಿತ್ಸೆಯು ಆತಂಕವನ್ನುಂಟುಮಾಡುವ ಸನ್ನಿವೇಶಗಳಲ್ಲಿ ವ್ಯಕ್ತಿಯ ಪ್ರತಿಕ್ರಯಿಸುವ ರೀತಿಯನ್ನು ಬದಲಾಯಿಸಲು ಸಹಾಯ ಮಾಡುವುದು.