Skip to content

ಖಿನ್ನತೆ

index4ಖಿನ್ನತೆ ಎಂದರೆ ಏನು?

ಖಿನ್ನತೆಗೂ ದುಃಖಕ್ಕೂ ಇರುವ ವ್ಯತ್ಯಾಸ

ಸಾಮಾನ್ಯವಾಗಿ ನಾವೆಲ್ಲರೂ ಕೆಲವೊಮ್ಮೆಯಾದರೂ ದುಃಖವನ್ನು ಅನುಭವಿಸುತ್ತೇವೆ. ಆದರೆ ಈ ದುಗುಡ ಭಾವನೆಯು ಸ್ವಲ್ಪ ದಿವಸಗಳ ನಂತರ ಕಳೆದುಹೋಗುತ್ತದೆ. ಖಿನ್ನತೆಯೆನ್ನುವುದು ನಿರಂತರ ಮಾನಸಿಕ ಗತಿಯ ಸಮಸ್ಯೆಯಾಗಿದೆ. ಇದು ಚಿಂತನೆ, ನೆನಪಿಡುವಿಕೆ, ಆತ್ಮ ವಿಶ್ವಾಸ, ಮಾನಸಿಕ ಪ್ರಕ್ರಿಯೆಗಳು, ಸಾಮಾಜಿಕ ಚಟುವಟಿಕೆಗಳು, ಕಾರ್ಯ ನಿರ್ವಹಿಸುವುದರ ಮೇಲೆ ಪ್ರಭಾವ ಬೀರಬಹುದು.  ಖಿನ್ನತೆ ಕೆಲವೊಮ್ಮೆ ಕಡಿಮೆ ಪ್ರಭಾವದ್ದಾಗಿದ್ದು ವ್ಯಕ್ತಿಯ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರದಿರಬಹುದು ಅಥವಾ ಅಧಿಕವಾಗಿ ವ್ಯಕ್ತಿಯ ಹೆಚ್ಚಿನ ಚಟುವಟಿಕೆಗಳ ಮೇಲೆ  ಪರಿಣಾಮವನ್ನು ಉಂಟುಮಾಡಬಹುದು. ಕೆಲವೊಮ್ಮೆ ಇದರ ವ್ಯಾಪ್ತಿಯು ಕೆಲವೊಂದು ಸಮಯ ಮಾತ್ರವೇ ಇರಬಹುದು, ಇನ್ನು ಕೆಲವೊಮ್ಮೆ ತಿಂಗಳುಗಳ ಪರ್ಯಂತ ಇದರ ಪ್ರಭಾವ ಇರುವುದು.

ಖಿನ್ನತೆಯಾಗಲು ಕಾರಣಗಳೇನು?

ಖಿನ್ನತೆಗೆ ಒಂದೇ ಕಾರಣವಿರುವುದಿಲ್ಲ. ಕೆಳಗೆ ಹೇಳುವ ಕಾರಣಗಳು ಮಿಶ್ರವಾಗಿ ಕೂಡ ಖಿನ್ನತೆಗೆ ಕಾರಣವಾಗಬಹುದು. ಖಿನ್ನತೆ ಕಾರಣ ಜೀವನದ ಘಟನೆಗಳು, ಚಿಂತನೆ ಶೈಲಿಗಳು, ಜೈವಿಕ ಅಂಶಗಳು ಮತ್ತು ವರ್ತನೆಗಳು.

ಜೀವನದ ಘಟನೆಗಳು – ವ್ಯಾಪಾರದಲ್ಲಿ ನಷ್ಟ, ಕುಟುಂಬದ ನಿಕಟ ಸದಸ್ಯ ಅಥವಾ ಸ್ನೇಹಿತನ/ಳ ಸಾವು ಇತ್ಯಾದಿಗಳು ಖಿನ್ನತೆಗೆ ಕಾರಣವಾಗಬಹುದು. ಹೀಗಿದ್ದೂ, ಈ ಸಂದರ್ಭಗಳಲ್ಲಿ ದುಗುಡ ಅನುಭವಿಸುವುದು ಸಹಜ ಮತ್ತು ಈ ಭಾವನೆಗಳು ಸಾಮಾನ್ಯವಾಗಿ ಸಮಯ ಕಳೆದಂತೆ ನಿವಾರಣೆಯಾಗುವುದು, ಆದರೆ ಕೆಲವೊಮ್ಮೆ ಇವುಗಳನ್ನು ಬಗೆಹರಿಸಲಾಗದೇ ಇದ್ದರೆ ಇವು ಬಹಳ ಸಮಯ ಉಳಿದು ಸಮಸ್ಯಾತ್ಮಕವಾಗುತ್ತದೆ.

ಚಿಂತನೆ ಶೈಲಿಗಳು – ನಾವು ನಮ್ಮ ಸುತ್ತಮುತ್ತಲಿನ ವಿಚಾರಗಳನ್ನು ಮತ್ತು ಘಟನೆಗಳನ್ನು ಯೋಚಿಸುವ ಮತ್ತು ಅರ್ಥೈಸುವ ಪರಿಗಳು ಖಿನ್ನತೆಗೆ ಕಾರಣವಾಗಬಹುದು.

ಜೈವಿಕವಾಗಿ ಕುಟುಂಬದಲ್ಲಿ ಖಿನ್ನತೆಯನ್ನು ಹೊಂದಿದವರಿದ್ದರೆ, ಮೆದುಳಿನಲ್ಲಿ ತೊಡಕಿದ್ದರೆ, ಮೆದುಳಿನಲ್ಲಿನ ರಾಸಾಯನಿಕ ಪದಾರ್ಥಗಳ ಅಸಮತೊಲನವಿದ್ದಲ್ಲಿ, ಅಂತಃಸ್ರಾವಕ (ಎಂಡೋಕ್ರೈನ್) ದೋಷಗಳಿಂದ ಕೂಡ ಖಿನ್ನತೆಯಾಗಬಹುದು. ಮಾನಸಿಕವಾಗಿ ಒತ್ತಡವುಂಟುಮಾಡುವ ಘಟನೆಗಳು (ಹತ್ತಿರದ ವ್ಯಕ್ತಿಯ ಸಾವು, ವ್ಯಾಪಾರ ನಷ್ಟ, ಕೆಲಸ ಕಳೆದುಕೊಳ್ಳುವುದು), ಋಣಾತ್ಮಕ ಯೋಚನೆಗಳು, ಮಾನಸಿಕ ಆಘಾತವುಂಟುಮಾಡುವ ದೈಹಿಕ ನಿಂದನೆ, ಲೈಂಗಿಕ ನಿಂದನೆ ಗಳು ಕೂಡ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗಬಹುದು.

ಲಕ್ಷಣಗಳು:

ಖಿನ್ನತೆಯಲ್ಲಿರುವ ವ್ಯಕ್ತಿಯು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ತನ್ನ ಕಾರ್ಯ ನಿರ್ವಹಣಾ ಅಸಾಮರ್ಥ್ಯವನ್ನು ತೋರ್ಪಡಿಸುವನು/ಳು.

ಶಾರೀರಿಕ ಲಕ್ಷಣಗಳು:

  • ಸುಸ್ತಾಗುವಿಕೆ
  • ಎದೆ ನೋವು ಅಥವಾ ಎದೆ ಬಡಿತದ ಏರುವಿಕೆ
  • ಅಜೀರ್ಣ
  • ಅತಿಯಾಗಿ ತಿನ್ನುವುದು ಅಥವಾ ಅತಿ ಕಡಿಮೆ ತಿನ್ನುವುದು.
  • ಉಸಿರಾಟದಲ್ಲಿ ತೊಂದರೆ.
  • ನಿದ್ರೆಯ ಸಮಸ್ಯೆ – ಅತಿಯಾಗಿ ನಿದ್ರಿಸುವುದು ಅಥವಾ ಅತಿ ಕಡಿಮೆ ನಿದ್ರಿಸುವುದು.
  • ಲೈಂಗಿಕತೆಯಲ್ಲಿ ಸಮಸ್ಯೆ – ಕಾಮದ ಕೊರತೆ.
  • ಉದಾಸೀನದಿಂದ ಚಟುವಟಿಕೆಗಳನ್ನು ಮಾಡುವುದು.
  • ನೋವು, ಬಾಧೆಗಳು, ಶೂಲೆಗಳು

ಮಾನಸಿಕ ಲಕ್ಷಣಗಳು:

  • ತೀವ್ರ ಅಸಹನೆ ಅಥವಾ ಅತೃಪ್ತಿ.
  • ನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ತೋರದೆ ಇರುವುದು ಅಥವಾ ಪಾಲ್ಗೊಳ್ಳದಿರುವುದು.
  • ಅವಾಸ್ತವಿಕವಾದ ಅಪರಾಧೀ ಮನೋಭಾವನೆಯನ್ನು ಹೊಂದುವುದು.
  • ಏಕಾಗ್ರತೆಯನ್ನು ಹೊಂದಲು, ನೆನಪಿಡಲು, ನಿರ್ಧಾರ ತೆಗೆದುಕೊಳ್ಳಲು ಅಸಾಮರ್ಥ್ಯ.
  • ಕಾರ್ಯ ಕ್ಷೇತ್ರದಲ್ಲಿ ಅಥವಾ ಕುಟುಂಬದೊಡನೆಯ ಜೀವನ ಕೆಡುವುದು.
  • ಆತ್ಮಹತ್ಯೆಯ ಯೋಚನೆಗಳು.
  • ಭವಿಷ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳುವುದು.
  • ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನವನ್ನು ಕಳೆದುಕೊಳ್ಳುವುದು.

ಯಾರು ಈ ರೀತಿಯ ತೊಂದರೆಗೀಡಾಗುವರು?

ಚಿಕ್ಕವರಿರುವಾಗಲೇ ದೈಹಿಕ, ಲೈಂಗಿಕ ಹಲ್ಲೆಗೊಳಗಾದವರು, ಹತ್ತಿರದ ಸಂಬಂಧಿಗಳನ್ನು ಕಳೆದುಕೊಂಡವರು, ಅತಿಕಡಿಮೆ ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನ ಇರುವವರು, ಪದೇ ಪದೇ ದುಖಕರ ವಿಚಾರಗಳನ್ನು ಅಥವಾ ಕಷ್ಟಕರ ಪರಿಸ್ಥಿತಿಗಳ ಬಗ್ಗೆಯೇ ಸದಾ ಚಿಂತಿಸಿ ಯಾತನೆ ಹೊಂದುವವರು, ಕುಟುಂಬದಲ್ಲಿ ತೋರಬಹುದಾದ ಖಿನ್ನತೆಯನ್ನು ಹೊಂದಿರುವವರು ಇದ್ದಲ್ಲಿ ಇದೇ ರೀತಿಯ ಪರಿಸ್ಥಿತಿಗಳೊಡನೆ ವ್ಯವಹರಿಸುವಾಗ ಖಿನ್ನತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿದೆ. ಉದಾ: ಚಿಕ್ಕ ವಯಸ್ಸಿನಲ್ಲಿಯೇ ಅಪಘಾತದಿಂದ ತಬ್ಬಲಿಯಾದ ಒಬ್ಬ ವ್ಯಕ್ತಿಯು ಕೆಲಸವನ್ನು ಕಳೆದುಕೊಂಡಲ್ಲಿ ಖಿನ್ನತೆಗೀಡಾಗುವ ಸಾಧ್ಯತೆಯಿದೆ.

ಖಿನ್ನತೆಯ ನಿವಾರಣೆ ಹೇಗೆ?

ಕಡಿಮೆ ಪ್ರಮಾಣದ ಖಿನ್ನತೆಗೊಳಗಾಗಿರುವ ವ್ಯಕ್ತಿಗಳಿಗೆ ಸೂಕ್ತ ರೀತಿಯ ಸಲಹೆಗಳು, ವ್ಯವಹಾರಿಕ ಸಮಸ್ಯೆಗಳ ಪರಿಹಾರಗಳು ಪರಿಣಾಮವನ್ನುಂಟುಮಾಡುವುದು. ಆದರೆ ಅತಿಯಾಗಿ ಖಿನ್ನವಾಗಿರುವ ವ್ಯಕ್ತಿಗಳಿಗೆ ಸೂಕ್ತ ಔಷಧಿಯ ಅಗತ್ಯವಿರುತ್ತದೆ. ಔಷಧಿಗಳು ಮತ್ತು ಮಾನಸಿಕ ಸಲಹೆಗಳು ಜೊತೆಗೂಡಿ ಪರಿಣಾಮಕಾರಿಯಾಗಿ ಖಿನ್ನತೆಯನ್ನು ನಿವಾರಣೆ ಮಾಡಬಹುದೆಂದು ಸಾಧಿಸಲಾಗಿದೆ.